Thursday 12 November 2009

ಭಾರತದ ಬ್ರಾಂಡ್ 'ಅಂಬಾಸಿಡರ್'!


ನಾನು ಕನ್ನಡಪ್ರಭದ ಮಂಗಳೂರು ಕಚೇರಿಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದೆ. ಆ ದಿನದ ನನ್ನ ಅಸೈನ್ಮೆಂಟ್ ಪ್ರಕಾರ ನನಗೆ ಮಂಗಳೂರು ವಿವಿ ಸೆನೆಟ್ ಸಭಾಂಗಣದಲ್ಲಿ ನಿಗದಿಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕು, ಅಲ್ಲಿಗೆ ಹೋಗಲು ವಾಹನ ವ್ಯವಸ್ಥೆಯಿದೆ, ಆ ಸಮಯಕ್ಕೆ ಸರಿಯಾಗಿ ವುಡ್ ಲ್ಯಾಂ‍ಡ್ ಹೋಟೆಲ್ ಬಳಿ ಹೋಗುವುದು ಎಂದಿತ್ತು. ಸಮಯಕ್ಕೆ ಸರಿಯಾಗಿ ಅಲ್ಲಿದ್ದೆ. 'ಪ್ರೆಸ್'ಗೆಂದು ಆಧುನಿಕ ಕಾರು ಕಾಯುತ್ತಿರಬಹುದು ಎಂದು ನಿರೀಕ್ಷಿಸಿದ್ದ ನನಗೆ ಅಚ್ಚರಿ ಕಾದಿತ್ತು. ವಿವಿ ಕುಲ ಸಚಿವರ ಅಂಬಾಸಿಡರ್ ಕಾರು ಅಲ್ಲಿ ನಿಂತಿತ್ತು!

'ಕಾರ್ ಕಾರ್ ಕಾರ್....' ಎಂದು 'ನನ್ನ ಪ್ರೀತಿಯ ಹುಡುಗಿ' ಚಿತ್ರದಲ್ಲಿ ಬಿ.ಜಯಶ್ರೀ ಹಾಡಿದಂತೆ ಭಾರತದಲ್ಲಿಂದು ಕಾರುಗಳದ್ದೇ ಸಾಮ್ರಾಜ್ಯ. ನ್ಯಾನೋ 'ಟಾಟ' ಮಾಡಿದ ನಂತರವಂತೂ ಶ್ರೀ ಸಾಮಾನ್ಯನೂ ಕಾರು ಬಿಡುತ್ತಿದ್ದಾನೆ. ವಿಶ್ವ ಮಟ್ಟದಲ್ಲೂ ಸಣ್ಣ ಕಾರುಗಳು ಜನಪ್ರಿಯತೆ ಪಡೆದಿದ್ದರೂ 'ಓಲ್ಡ್ ಈಸ್ ಗೋಲ್ಡ್' ಎಂಬಂತೆ ನಮ್ಮ 'ಅಂಬಾಸಿಡರ್' ಇಂದಿಗೂ ಜನಪ್ರಿಯತೆಯನ್ನು ಕಳಕೊಂಡಿಲ್ಲ!

'ಅಂಬಾಸಿಡರ್' ಪದ ಕೇಳಿದಾಕ್ಷಣ ರಾಯಭಾರಿ ಎಂಬ ಪದಕ್ಕೆ ಪರ್ಯಾವಾಗಿ ಬಳಸಿರಬೇಕು ಎಂದು ಚಿಂತಿಸುವವರು ಹಲವರು. ಹಿಂದೂಸ್ತಾನ್ ಮೋಟರ್ಸ್ ತಯಾರಿಸಿದ 'ಅಂಬಾಸಿಡರ್' ಕಾರು ರಾಜ ಗಾಂಭೀರ್ಯತೆಗೆ-ಸುರಕ್ಷತೆಗೆ ಹೆಸರುವಾಸಿ. ಆಧುನಿಕ ಕಾರುಗಳ ತಳುಕು ಬಳುಕಿನಲ್ಲಿಯೂ ಅದು ಇಂದು ತನ್ನ ಪ್ರಸಿದ್ಧಿಯನ್ನು ಉಳಿಸಿಕೊಂಡಿದೆ.

ಇಂದು ಅಂಬಾಸಿಡರ್ ಕಾರು ಶ್ರೀಮಂತಿಕೆಯ ಸಂಸ್ಕೃತಿಯೆಂಬಂತೆ ಬಳಕೆಯಾಗುತ್ತಿದೆ. ಉಳ್ಳವರ ಕೈಯಲ್ಲಿ ಎಷ್ಟೇ 'ಇದ್ದ'ರೂ ಅದರಲ್ಲಿ ಮುಕ್ಕಾಲು ವಾಸಿ ಜನ ಇಂದು ಇದೇ ಕಾರನ್ನು ಬಳಸುತ್ತಿದ್ದಾರೆ. ಮನೆಯಲ್ಲಿರುವ ಹಿರಿಯರ ಬಳಿ ಹೋಗಿ ನಾನೊಂದು ಹೊಸ ಕಾರನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದರೆ, ಈಗಲೂ ಅವರು ಮೊದಲ ಪ್ರತಿಕ್ರಿಯೆ 'ಅಂಬಾಸಿಡರಾ...' ಎಂದು. ದೆಹಲಿಯ ಪಾರ್ಲಿಮೆಂಟ್ ಹೌಸಿಗೆ ಹೋದರೆ ಅದರ ಮುಂದೆ ಅಚ್ಚುಕಟ್ಟಾಗಿ, ಸಾಲಾಗಿ ನಿಂತಿರುವ ಅಂಬಾಸಿಡರ್ ಕಾರುಗಳನ್ನು ನೋಡುವುದೇ ಚಂದ. ಮಂತ್ರಿ-ಮಹೋದಯರ(ಕರ್ನಾಟಕ‌ ಹೊರತುಪಡಿಸಿ) ಮೊದಲ ಆದ್ಯತೆಯ ಕಾರು ಅಂಬಾಸಿಡರ್! ಸುರಕ್ಷತೆಯ ಮಟ್ಟಿಗೆ ಹೇಳುವುದಾದರೆ ನಂ.1 ಸ್ಥಾನ ಇದೇ ಕಾರಿಗೆ. ಹಲವು ಭೀಕರ ಅಪಘಾತಗಳಲ್ಲಿ ಕಾರು ನುಜ್ಜುಗುಜ್ಜಾಗಿದ್ದರೂ ಪ್ರಯಾಣಿಕರು ಬದುಕುಳಿದಿರುವ ದೃಷ್ಟಾಂತಗಳಿವೆ. ಲಲನಾಮಣಿ ಸಣ್ಣ ಕಾರುಗಳು 'ಸ್ಟೈಲ್'ಗೆ ಮಾತ್ರ ಸೂಕ್ತ!

ಈ ಕಾರ್ ನ‌ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಬದುಕೆಂಬ ಜಟಕಾ ಬಂಡಿಯ ಬೆನ್ನೇರಿ ಹೊರಟ ಶ್ರಮ ಜೀವಿಗಳಿಗೆ ಸಾಥಿಯಾದದ್ದು ಇದೇ ಕಾರು. ಕೆಲ ವರ್ಷಗಳ ಹಿಂದೆ ದಕ್ಷಿಣ ಕನ್ನಡದಲ್ಲಿ ಕಂಟ್ರಾಕ್ಟ್ ಕ್ಯಾರೇಜ್ ಖಾಸಗಿ ಬಸ್ಸು ಕಾಲಿಡುವ ಮೊದಲು ಟ್ಯಾಕ್ಸಿಗಳಂತೆ ಈ ಕಾರುಗಳಿದ್ದವು. ಮಂಗಳೂರಿನಿಂದ ಜಿಲ್ಲೆಯ ವಿವಿಧ ಭಾಗಕ್ಕೆ ಹಗಲಿರುಳು ಎನ್ನದೇ ಸಂಚರಿಸುತ್ತಿದ್ದವು. ಹಲವು ಹೊಟ್ಟೆಗಳನ್ನು ತಣ್ಣಗಿಟ್ಟಿದ್ದವು. ಆದರೆ 'ರಾಜಕಾರಣ'ದ ಕರಿನೆರಳು ಅದರ ಮೇಲೆ ಬಿದ್ದಿದ್ದರಿಂದ ಆ ಕಾರುಗಳಲ್ಲಿ ಹೆಚ್ಚಿನವು ಮನೆಯ ಮುಂದಿನ ಕಾರು ಶೆಡ್ಡುಗಳಲ್ಲಿ ನಿಂತು ತಮ್ಮ ಅವಸಾನದ ದಿನಗಳನ್ನು ನೋಡುತ್ತಿವೆ. ಅದನ್ನೇ ನಂಬಿದ್ದ ಹಲವು ಹೊಟ್ಟೆಗಳು ಬಟ್ಟೆ ಕಟ್ಟಿಕೊಂಡಿವೆ. ಕಾರು ಬಟ್ಟೆ ಒಣಗಿಸಿಲಿಕ್ಕೂ ಬಳಕೆಯಾಗುತ್ತಿವೆ! ಇಂದು ಹಲವು ಮುದಿ ಜೀವಗಳು ಆಶಾಕಿರಣವನ್ನು ಹೊತ್ತು ಪ್ರಯಾಣಿಕ ಸೇವೆ ನೀಡುತ್ತಿವೆ. ದಿನ ಬೆಳಗಾದರೆ '....ರು..... ರು...' ಎಂದು ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು 'ಕೂಗಿ' ಕರೆಯುತ್ತಿವೆ. ಇಂದು ಹೊಸ ಬೈಕ್ ಖರೀದಿಸುವ ಅರ್ಧದಷ್ಟು ಹಣದಲ್ಲಿ ಅಂಬಾಸಿಡರ್ ಕಾರು ಕೊಳ್ಳಬಹುದು. ಸುಸ್ಥಿತಿಯಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರು ಚೀಪ್ ಆಗಿ ಸಿಗುತ್ತದೆ. ಎರಡು ಜನ ತ್ರಾಸದಾಯಕವಾಗಿ ಪ್ರಯಾಣಿಸುವ ಬದಲು ಕುಟುಂಬ ಸಮೇತ ಆರಾಮದಾಯಕ ಟೂರ್ ಹೋಗಬಹುದು. ಅಂಬಾಸಿಡರ್ ಕಾರ್ ನ‌ಲ್ಲಿ ಪ್ರಯಾಣಿಸುವಾಗ ಸಿಗುವ ಮಜಾವೇ ಬೇರೆ. ಅದೊಂದು ವಿಶಿಷ್ಟ ಅನುಭವ. ಆರಾಮದಾಯಕ ಪ್ರಯಾಣ.

ಮೊನ್ನೆ ಸ್ನೇಹಿತನೊಬ್ಬ ಇತ್ತೀಚಿಗೆ ಬಿಡುಗಡೆಯಾದ ಎಲ್ಲರ ಮನಗೆದ್ದ ದುಬಾರಿ ಕಾರೊಂದನ್ನು, ವಾಹನಗಳನ್ನು ವಿಶ್ಲೇಷಿಸುವ '....' ಮ್ಯಾಗಝಿನ್ 'ಟ್ಯಾಕ್ಸಿ'ಗೆ ಸೂಕ್ತ ಎಂದು ಬರೆದಿದ್ದರಿಂದ ಅದನ್ನು 'ಪ್ರೆಸ್ಟೀಜ್'ನ ಸಂಕೇತ ಎಂದು ಖರೀದಿಸಿದವರೆಲ್ಲಾ ಮಾರುವ ಯೋಚನೆಯಲ್ಲಿದ್ದಾರೆ ಎಂದಿದ್ದ. ಬಹುಷಃ ಇಂತಹ ಒಂದು 'ಚೌಕಟ್ಟು'ಗಳೆಲ್ಲವನ್ನೂ ಮೀರಿ ನಿಂತ ಕಾರು ಎಂದರೆ ಅದು ಅಂಬಾಸಿಡರ್ ಮಾತ್ರ. ಅಂಬಾಸಿಡರ್ ಗೆ ಅಂಬಾಸಿಡರೇ ಸರಿಸಾಠಿ. ಈ ಕಾರನ್ನು ಭಾರತದ ಬ್ರಾಂಡ್ 'ಅಂಬಾಸಿಡರ್' ಎಂದರೆ ಅತಿಶಯೋಕ್ತಿಯಾಗದು. ಹ್ಯಾಟ್ಸಾಫ್, a big selute to ಹಿಂದೂಸ್ತಾನ್ ಮೋಟರ್ಸ್!

ಅಂಚೆಗೆ ಹಾಕುವ ಮುನ್ನ ಕೊಂಚ ನಿಲ್ಲಿ...


ಮನದಲ್ಲಿ ಮೂಡಿದ ಲೇಖನ, ನುಡಿಚಿತ್ರ, ಕವನ ಹೀಗೆ ಸೃಜನಾತ್ಮಕ ಬರಹಗಳ ವಿವಿಧ ರೂಪಗಳನ್ನು ಲೇಖನಿಯಿಂದ ಕಾಗದಕ್ಕೆ ಭಟ್ಟಿ ಇಳಿಸಿದ ನಂತರ ಪ್ರತಿಯೊಬ್ಬರೂ ಅಂಚೆಗೆ ಹಾಕಲು ಓಡುತ್ತಾರೆ. ತಮ್ಮ ಬರಹ '......' ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂಬ ಧಾವಂತ ಅವರಲ್ಲಿರುತ್ತದೆ. ಆದರೆ ಕೆಲವರ ಈ ಧಾವಂತದಿಂದಾಗಿಯೇ ಬರಹಗಳು ಯಾವತ್ತಿದ್ದರೂ 'ಯೂಸ್ ಮಿ...' ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕಸದಬುಟ್ಟಿಯಲ್ಲಿ ಭದ್ರವಾಗಿ ಯೂಸ್ ಆಗಿರುತ್ತದೆ. ಇತ್ತ, ಬರಹ ಪ್ರಕಟವಾಗುವ ಹುಮ್ಮಸ್ಸಿನಲ್ಲೇ ಕಾಯುತ್ತಿರುವ ಬರಹಗಾರನ ಕಾಯುವಿಕೆಯ ತಾಳ್ಮೆ ಒಮ್ಮೊಮ್ಮೆ ತಪ್ಪಿ ಹೋಗುತ್ತದೆ. ಅದು ಮುಂದೆ ಆತನಿಂದ ಬರಹಗಳನ್ನು ಬರೆಯಿಸದೇ ಇರಬಹುದು!
ಖ್ಯಾತ ಪರ್ತಕರ್ತ ರವಿಬೆಳಗೆರೆಯವರು ಹೇಳಿದಂತೆ ಎಂತಹಾ ಅರ್ಜೆಂಟೇ ಇರಲಿ, ಮೊದಲು ಅದನ್ನೆಲ್ಲಾ ಬದಿಗೊತ್ತಿ ಬರವಣಿಗೆ ಮಾಡಿದ ನಂತರ ಅದನ್ನು ಪತ್ರಿಕೆಗಳಿಗೆ ಕಳುಹಿಸಲು ಅಂಚೆಗೆ ಹಾಕುವ ಕೆಲಸವನ್ನು ಮೊದಲು ಮಾಡಬೇಕು. ಆದರೆ ಅದಕ್ಕಿಂತ ಮೊದಲು ಕೊಂಚ ನಿಲ್ಲಬೇಕು.
'ಆಡು ಮುಟ್ಟದ ಸೊಪ್ಪಿಲ್ಲ' ಎಂಬಂತೆ ಶಿವರಾಮ ಕಾರಂತರು ಮುಟ್ಟದ ಸಾಹಿತ್ಯ ಪ್ರಕಾರಗಳಿಲ್ಲ. ಅವರಿಗೆ ಬರವಣಿಗೆ ಎಂಬುವುದು ತಮ್ಮ ನಾಡಿ ಮಿಡಿತದಂತಿತ್ತು. ಅವರು ಎಂದಿಗೂ ಒಮ್ಮೆ ಬರೆದದ್ದನ್ನು ಮತ್ತೆ ಓದಿ ನೋಡುತ್ತಿರಲಿಲ್ಲವಂತೆ. ಅದೇ ಬರಹಗಳು ಇಂದು ಸಾಹಿತ್ಯದ ವಿವಿಧ ಪ್ರಕಾರಗಳಾಗಿ ನಮ್ಮ ಮುಂದಿವೆ. ಅದನ್ನು ನೋಡಿದರೆ ಅದು ಒಮ್ಮೆಗೇ ಬರೆದ ಕರಡು ಪ್ರತಿ ಎಂದು ನಮಗನಿಸುವುದಿಲ್ಲ. ಅಂತಹ ಪ್ರಭುದ್ದತೆ ಆ ಬರಹಗಳಲ್ಲಿತ್ತು. ಹಾಗಂತ ಎಲ್ಲ ಬರಹಗಾಗರರು ಪ್ರಭುಧ್ದರಲ್ಲ. ಬರವಣಿಗೆ ಕ್ಷೇತ್ರದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವವರೆಲ್ಲಾ 'ನಾನು ಒಮ್ಮೆ ಬರೆದಿದ್ದನ್ನು ಮತ್ತೆ ಓದುವುದಿಲ್ಲ. ಡೈರೆಕ್ಟಾಗಿ ಅದನ್ನು ಕಳುಹಿಸುತ್ತೇನೆ' ಎಂಬ ವರಸೆ ತೆಗೆದರೆ ಬಹುಷಃ ಅವರಷ್ಟು ದೊಡ್ಡ ದಡ್ಡರು ಬೇರೆ ಯಾರೂ ಇರಲಿಕ್ಕಿಲ್ಲ! ಅದು ಹಾಸ್ಯಾಸ್ಪದವೂ ಕೂಡ.
'ನಾನು ಬರೆದ ಬರಹಗಳನ್ನು ಎಷ್ಟು ಸಾರಿ ಪುನಃ ತಿದ್ದೀ ತಿದ್ದಿ ಬರೆಯುತ್ತೇನೋ ನನಗೇ ಗೊತ್ತಿಲ್ಲ. ಕೆಲವೊಮ್ಮೆ ಒಂದು ಪ್ಯಾರಾ ಬರೆಯುವುದು, ಆ ಹಾಳೆಯನ್ನು ಹರಿದು ಬಿಸಾಡುವುದು, ಮತ್ತೊಂದರಲ್ಲಿ ಹೊಸತಾಗಿ ಬೇರೆಯದನ್ನೇ ಶುರುಮಾಡುವುದು... ಹೀಗೆ ಮಾಡಿ ಬರೆಯುತ್ತೇನೆ. ಎಲ್ಲ ಬರೆದಾದ ನಂತರ ಕಸದಬುಟ್ಟಿ ನೋಡಿದರೆ ಕೆಲವೊಮ್ಮೆ ವೇಸ್ಟ್ ಮಾಡಿದ ಹಾಳೆಗಳಿಂದ ಅದು ತುಂಬಿರುತ್ತದೆ' ಎನ್ನುತ್ತಾರೆ ಉದಯೋನ್ಮುಖ ಬರಹಗಾರ್ತಿ, ಪತ್ರಿಕೆಯೊಂದರ ಸಂಪಾದಕಿ ಮನೋರಮ.
'ನಾನು ಮೊದಲ ಬಾರಿಗೆ ಲೇಖನವೊಂದನ್ನು ಬರೆದಿದ್ದೆ. ಅದು ನಾಲ್ಕು ಪುಟಗಳ ಸುಧೀರ್ಘ ಲೇಖನ. ಪತ್ರಿಕೆಯೊಂದಕ್ಕೆ ಅದನ್ನು ಕಳುಹಿಸಿದೆ. ಪ್ರಕಟವೂ ಆಯ್ತು. ಆದರೆ ನಾಲ್ಕು ಪುಟಗಳಷ್ಟು ಅಲ್ಲಿರಲಿಲ್ಲ. ಬಹುಷಃ ಮುಕ್ಕಾಲು ಪುಟದಷ್ಟಿತ್ತು. ನನ್ನ ಬರವಣಿಗೆಯಲ್ಲಿರುವ ತಪ್ಪುಗಳೇನೆಂದು ಅಲ್ಲಿ ತಿಳಿಯಿತು', ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ ಇಶ್ರತ್.
ಪ್ರತೀ ಪತ್ರಿಕೆಗಳಲ್ಲೂ ಉಪಸಂಪಾದಕರಿರುತ್ತಾರೆ. ಉಪ ಸಂಪಾದಕರ ಕೆಲಸ ಕಟ್ಟಿಂಗ್ ಮಾಡುವುದು. ಬರವಣಿಗೆಯನ್ನು ತಿದ್ದಿ ತೀಡಿ ಅದಕ್ಕೊಂದು ರೂಪ ಕೊಡುವುದು. ಕೆಲವೊಮ್ಮೆ ಅವರ ಕೈಯಲ್ಲಿ ಕಟ್ಟಿಂಗ್ಗೆ ಅಯೋಗ್ಯವಾಗಿರುವ ಬರಹಗಳು ಸಿಕ್ಕಿದಾಗ ತಾಳ್ಮೆ ಕಳಕೊಳ್ಳುವುದೂ ಇದೆ. ಆಗ ಅದು ನೇರವಾಗಿ 'ಯೂಸ್ ಮಿ'ಯ ಕದ ತಟ್ಟುತ್ತದೆ.
ಖ್ಯಾತ ಸಾಹಿತಿಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಅದರಲ್ಲಿ ಹಲವರು ಹುಟ್ಟು ಬರಹಗಾರರೇ ಅಲ್ಲ. 'ಹಾಡಿ ಹಾಡಿ ರಾಗ' ಎಂಬಂತೆ ತಮ್ಮ ಸತತ ಪ್ರಯತ್ನದಿಂದ ಅವರಿಂದು ಆ ಮಟ್ಟಕ್ಕೆ ಬೆಳೆದಿದ್ದಾರೆ. ಕೆಲವರ್ಷಗಳ ಹಿಂದೆ ಪ್ರಜಾವಾಣಿ ಪತ್ರಿಕೆಯ ದೀಪಾವಳಿ ವಿಶೇಂಷಾಂಕವನ್ನು ಬಿಡುಗಡೆ ಮಾಡುತ್ತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಒಂದು ಮಾತು ಹೇಳಿದ್ದರು. 'ನಾನು -ಬರವಣಿಗೆ ಆರಂಭಿಸಿದ ಮೊದಲ ದಿನಗಲ್ಲಿ ದೀಪಾವಳಿ ವಿಶೇಷಾಂಕದ ಕಥಾ ಸ್ಪರ್ಧೆಗೆ ಕಥೆ ಕಳುಹಿಸಿದ್ದೆ. ಆದರೆ ಅಲ್ಲಿ ಅದು ಪ್ರಕಟವಾಗಿರಲಿಲ್ಲ. ಅದರ ಫಲಿತಾಂಶವಾಗಿ ನಾನೊಬ್ಬ ಕಥೆಗಾರನಾಗಲಿಲ್ಲ...' ಎಂದಿದ್ದರು. ಬಹುಷಃ ಅವರ ಮಾತುಗಳು ನಾನು ಬರೆದದ್ದೆಲ್ಲಾ ಪ್ರಕಟವಾಗಬೇಕು ಎನ್ನುವ ಪ್ರತಿಯೊಬ್ಬರಿಗೂ ಕಿವಿಮಾತು ಹೇಳುವಂತಹದ್ದು.
ಪ್ರತೀ ಬಾರಿಯೂ ಬರವಣಿಗೆ ಮುಗಿಸಿದ ನಂತರ ಅದನ್ನು ಮತ್ತೊಮ್ಮೆ ಓದಬೇಕು. 'ಹೆತ್ತವರಿಗೆ ಹೆಗ್ಗಣ ಮುದ್ದು 'ಎಂಬಂತೆ ನಮ್ಮ ತಪ್ಪುಗಳು ನಮಗೇ ಗೋಚರಿಸದು. ಮಗದೊಮ್ಮೆ ಅದು ತನ್ನದಲ್ಲ ಬೇರೆಯವರದ್ದು ಎಂಬ ಮನಸ್ಸಿನಿಂದ ಓದಬೇಕು. ಆಗ ನಮ್ಮ ತಪ್ಪುಗಳು ತಿಳಿಯುತ್ತವೆ. ಅದನ್ನು ಪುನಃ ಬೇರೆಯೇ ಬರೆಯಬೇಕು. ಆಗ ಅಲ್ಲೊಂದು ಸುಂದರ ಬರವಣಿಗೆ ಮೂಡುತ್ತದೆ. ಇದಕ್ಕಾಗಿ ಕನಿಷ್ಟ ಪಕ್ಷ ಮೂರ್ನಾಲ್ಕು ಪ್ರಯತ್ನಗಳು ಬೇಕಾಗಬಹುದು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಒಂದು ಮಾತಿದೆ. 'first impression is the best impression'. ಅದು ಖಂಡಿತ ನಿಜ. ಸರ್ವಕಾಲಿಕ ಸತ್ಯವೂ ಕೂಡ. ಮೊದಲ ಬರಹ ಪತ್ರಿಕೆಗೆ ಕಳುಹಿಸಿದ್ದು ಸ್ವೀಕೃತವಾದರೆ, ಶೈಲಿ ಇಷ್ಟವಾದರೆ ಮುಂದಿನ ಅವರ ಹಿಟ್ ಲಿಸ್ಟ್ ನಲ್ಲಿ ಆ ಬರಹಗಾರನ ಬರಹಕ್ಕೆ ಪ್ರಾಶಸ್ತ್ಯತೆಯಿರುತ್ತದೆ. ಕೇವಲ ಬೈಲೈನ್ ನಿಂದಲೇ ಅದರ ಶೈಲಿ ಯಾವ ತರಹ ಇರುತ್ತದೆ ಎಂಬ ಸೂತ್ರವೂ ಅವರಿಗೆ ಗೊತ್ತಿರುತ್ತದೆ. ಇನ್ನೇಕೆ ತಡ. ಲೇಖನಿಯನ್ನು ಕಾರ್ಯರೂಪಕ್ಕಿಳಿಸೋಣ. ಒಳ್ಳೆಯ ಬರವಣಿಗೆಯನ್ನು ಅಲ್ಲಿ ಮೂಡಿಸೋಣ. ಅಂಚೆಗೆ ಹಾಕುವ ಮುನ್ನ..... ಗುಡ್ ಲಕ್.

Thursday 3 September 2009

ಇಲ್ಲಿ ಎಕ್ಸಾಂಗಳೆಲ್ಲ ಆನ್ ಲೈನ್ ನಲ್ಲೇ!



*ಉಜಿರೆಯ ಶ್ರೀ ಧ.ಮ. ಕಾಲೇಜಿನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಈ ಪದ್ದತಿ.
*ಇದು ಯಶೋವರ್ಮರ ಕನಸಿನ ಕೂಸು

ಸ್ವಾಯುತ್ತತೆ ಎಂಬ ವೇಗವರ್ಧಕವನ್ನು ಮುಡಿಗೇರಿಸಿಕೊಂಡು ಯಶಸ್ವಿಯಾಗಿ ತೃತೀಯ ವರ್ಷದತ್ತ ಮುನ್ನಡೆಯುತ್ತಿರುವ ಉಜಿರೆಯ ಶ್ರೀ ಧ.ಮ. ಕಾಲೇಜಿನ ಕಿರೀಟಕ್ಕೀಗ ಮತ್ತೊಂದು ಗರಿ. ಇಲ್ಲಿ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳು ಪೆನ್ ಬಳಸಬೇಕಾದ್ದಿಲ್ಲ, ಕಂಪ್ಯೂಟರ್ ಮುಂದೆ ಕೂತು 'ಮೌಸ್'ನಲ್ಲಿ ಕ್ಲಿಕ್ಕಿಸಿದರಾಯ್ತು. ಹಣೆಬರಹವನ್ನು ಕಂಪ್ಯೂಟರೇ ನಿರ್ಧರಿಸುತ್ತದೆ!
ಇದು ಆನ್ ಲೈನ್ ಎಕ್ಸಾಮಿನೇಶನ್. ಉನ್ನತ ಕಂಪೆನಿಗಳಲ್ಲಿ ಇಂಟರ್ ವ್ಯೂವ್ ಸಂದರ್ಭದಲ್ಲಿ ಬಳಸಲಾಗುತ್ತಿದ್ದ ಈ ಪದ್ದತಿಯನ್ನು ಪದವಿ ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳು ಬಳಸುತ್ತಿರುವುದು ಭಾರತದಲ್ಲೇ ಪ್ರಥಮ ಬಾರಿ.
*ಪ್ರಶ್ನೆಗಳೆಲ್ಲವೂ ಆಬ್ಜೆಕ್ಟಿವ್: ಪರೀಕ್ಷೆ ಗಣಿತ, ವಿಜ್ಞಾನ, ರಸಾಯನಶಾಸ್ತ್ರ, ಭೌತಶಾಸ್ತ್ರ, ರಾಜ್ಯಶಾಸ್ತ್ರ ಹೀಗೆ ಯಾವುದೇ ಆಗಿರಲಿ, ಪ್ರಶ್ನೆಗಳೆಲ್ಲ ಆಬ್ಜೆಕ್ಟಿವ್ ರೀತಿಯದ್ದಾಗಿರುತ್ತದೆ. ಒಟ್ಟು 25 ಪ್ರಶ್ನೆಗಳನ್ನು ನೀಡಲಾಗುತ್ತದೆ. ಪರೀಕ್ಷೆಯ ಒಟ್ಟು ಕಾಲಾವಧಿ 45 ನಿಮಿಷ. ವಿದ್ಯಾರ್ಥಿ ತನ್ನ ರಿಜಿಸ್ಟರ್ ಸಂಖ್ಯೆಯನ್ನು ಆಯಾ ಸಬ್ಜೆಕ್ಟ್ ಕೋಡ್ ನೀಡಿ ಪಾಸ್ ವರ್ಡ್ ನೀಡಿದ ನಂತರ ಒಂದೆರಡು ನಿಮಿಷಗಳಲ್ಲಿ ಪ್ರಶ್ನೆ ಪತ್ರಿಕೆ ಕಂಪ್ಯೂಟರ್ ಪರದೆಯಲ್ಲಿ ಹಾಜರ್. ಬಳಿಕವಷ್ಟೇ ಕೌಂಟ್ಡೌನ್ ಪ್ರಾರಂಭವಾಗುವುದು. ಇಲ್ಲಿ ವಿದ್ಯಾರ್ಥಿಗಳು ಕೀ ಬೋರ್ಡನ್ನೂ ಬಳಸುವ ಪ್ರಮೇಯವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯ ಪ್ರಶ್ನೆ ಪತ್ರಿಕೆಯಲ್ಲಿ ನೀಡಲಾಗಿರುವ ನಾಲ್ಕು ಉತ್ತರಗಳಲ್ಲಿ ಒಂದು ಸರಿ ಉತ್ತರಕ್ಕೆ ಕ್ಲಿಕ್ ಮಾಡಿದರಾಯ್ತು. ಬೇಗ ಬೇಗನೇ ಕ್ಲಿಕ್ ಮಾಡಿ ಮುಗಿಸಿದರೆ ಮರುಕ್ಷಣವೇ ಹೋಗಬಹುದು. 'ಅಯ್ಯೋ ಒಮ್ಮೆ ಕ್ಲಿಕ್ ಮಾಡಿದ್ದು ತಪ್ಪೂಂತ ಮತ್ತೆ ತಿಳಿದರೆ, ಸರಿಪಡಿಸಲಿಕ್ಕಾಗಲ್ವಾ?' ಎಂಬ ಚಿಂತೆ ಬೇಡ. ಎಲ್ಲಾ ಕ್ಲಿಕ್ ಮಾಡಿದ ನಂತರ ಪರೀಕ್ಷಿಸಿ ಸೇವ್ ಕೊಟ್ಟರೆ ಆಯ್ತು. ಪುಸ್ತಕದ ಬದನೆಕಾಯಿಯನ್ನು ಬಾಯಿಪಾಠ ಮಾಡಿ ಹೋದರೆ ಏನೂ ಪ್ರಯೋಜನವಾಗಲಿಕ್ಕಿಲ್ಲ. ಪ್ರತೀ ಶಬ್ದವನ್ನೂ ಓದಿಕೊಂಡಿರಬೇಕು. ಅದಕ್ಕಿಂತ ಮಿಗಿಲಾಗಿ ತರಗತಿಯಲ್ಲಿ ವಿದ್ಯಾರ್ಥಿ ಏಕಾಗ್ರತೆಯಿಂದಿರಬೇಕು.
*ಫಲಿತಾಂಶಗಳೆಲ್ಲವೂ ಬೇಗ: ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳನ್ನು ಕ್ಲಿಕ್ ಮಾಡಿ ಸೇವ್ ಎಂದು ಕೊಟ್ಟ ಮೆರುಕ್ಷಣವೇ ಸಂದೇಶವೊಂದು ಕಂಪ್ಯೂಟರ್ ಪರದೆಯ ಮೇಲೆ ಮೂಡುತ್ತದೆ. ಅದಕ್ಕೆ 'ಒಕ್' ಎಂದು ನೀಡಿದರೆ ಕ್ಷಣಾರ್ಧದಲ್ಲೇ 25 ಪ್ರಶ್ನೆಗಳಲ್ಲಿ ಅಭ್ಯರ್ಥಿಯ ಸರಿ ಉತ್ತರ ಎಷ್ಟು ಎಂದು ತಿಳಿಸುತ್ತದೆ. 'ಒಮ್ಮೆ ಪರೀಕ್ಷೆ ಬರೆದ ನಂತರ ಅದೇ ಸಬ್ಜೆಕ್ಟ್ ನ್ನು ಪರೀಕ್ಷೆ ಪುನಃ ಬರೆಯಲು ಆಗುವುದಿಲ್ಲ. ಕಾರಣ ಈಗಷ್ಟೇ ಪರೀಕ್ಷೆ ಬರೆದದ್ದು ಸರ್ವರ್ ನಲ್ಲಿ ಸೇವ್ ಆಗಿರುತ್ತದೆ. ಅದನ್ನು ಬದಲಿಸಲು ಸಾಧ್ಯವಿಲ್ಲ. ಒಂದು ವೇಳೆ ಪ್ರಯತ್ನಪಟ್ಟರೂ ನೀವು ಎಕ್ಸಾಂ ಬರೆದಿದ್ದೀರಿ ಎಂಬ ಸಂದೇಶ ಮೂಡುತ್ತದೆ' ಎನ್ನುತ್ತಾರೆ ಕಾಲೆಜಿನ ಪರೀಕ್ಷಾ ಸಮಿತಿಯ ಸದಸ್ಯ ಜಯಕುಮಾರ್ ಶೆಟ್ಟಿ.
*ನಕಲಿಗಿಲ್ಲ ಅವಕಾಶ: ಒಂದೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರಬೇಕಾದರೆ ಹತ್ತಿರ ಹತ್ತಿರ ಕುಳಿತುಕೊಂಡ ವಿದ್ಯಾರ್ಥಿಗಳು ನಕಲಿ ಮಾಡಬಹುದು ಎಂದು ಭಾವಿಸಿದ್ದರೆ, ಅದು ತಪ್ಪು. ಪ್ರಶ್ನೆ ಪತ್ರಿಕೆಗಳನ್ನು ನಾಲ್ಕು ಮಾದರಿಗಳಲ್ಲಿ ಮಾಡಲಾಗುತ್ತದೆ. ಒಬ್ಬರಿಂದ ಒಬ್ಬರಿಗೆ ಅದು ಭಿನ್ನವಾಗಿರುತ್ತದೆ. ನಕಲಿ ಮಾಡುವ ಖಯಾಲಿ ಇರುವವರಿಗೆ ಇಲ್ಲಿ ಅವಕಾಶವಿಲ್ಲ.
*ಇದು ಯಶೋವರ್ಮರ ಕನಸಿನ ಕೂಸು: ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡುವ ಈ ಆನ್ ಲೈನ್ ಎಕ್ಸಾಂ ಕಾಲೇಜಿನ ಪ್ರಾಂಶುಪಾಲ ಡಾ| ಬಿ.ಯಶೋವರ್ಮರ ಕನಸಿನ ಕೂಸು. 'ಇದು ಸ್ಪರ್ಧಾತ್ಮಕ ಯುಗ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳೆಲ್ಲವೂ ಕಂಪ್ಯೂಟ ರ್ ನಲ್ಲೇ ಆಗಿರುತ್ತದೆ. ಅಂತಹ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳು ಸನ್ನದ್ದರಾಗಬೇಕು ಎಂಬ ಉದ್ದೇಶದಿಂದ ಪದವಿಯಲ್ಲಿ ಈ ವರ್ಷದಿಂದ ಆನ್ ಲೈನ್ ಪರೀಕ್ಷೆಯನ್ನು ಪ್ರಾರಂಭಿಸಿದ್ದೇವೆ' ಎಂದು ತಮ್ಮ ಕನಸು ನನಸಾದ್ದನ್ನು ಸಂತಸದಲ್ಲಿ ಹಂಚಿಕೊಳ್ಳುತ್ತಾರೆ ಅವರು.
*ಯಶಸ್ಸಿನ 'ಕಾಣದ' ಕೈಗಳಿವು: ಈ ಯೋಜನೆ ಪ್ರಾಂಶುಪಾಲರಲ್ಲಿ ಮೂಡಿದಾಗ ಅದಕ್ಕೆ ಪೂರ್ಣವಾಗಿ ಸ್ಪಂದಿಸಿದವರು ಕಾಲೇಜಿನ ಸಾಫ್ಟ್ ವೇರ್ ಡೆವೆಲಪಿಂಗ್ ವಿಭಾಗದವರು. ಅವರ ಶ್ರಮದ ಪರಿಣಾಮವಾಗಿ ಈ ಪದ್ದತಿ ಜಾರಿಗೆ ಬಂದಿದೆ. 'ಹತ್ತು ಜನರ ತಂಡ ಒಂದು ತಿಂಗಳ ಸತತ ಪ್ರಯತ್ನದಿಂದ ಈ ಸಾಫ್ಟ್ ವೇರ್ ಮಾಡಿದೆ. ಆನ್ ಲೈನ್ ಎಕ್ಸಾಂ ಸಾಫ್ಟ್ ವೇರ್ ಮಾಡುವಾಗ ನಮಗೇ ಒಂಥರಾ 'ಎಕ್ಸಾಂ' ಎದುರಿಸಿದ ಅನುಭವವಾಯ್ತು. ಪ್ರಾರಂಭದಲ್ಲಿ ಹಲವು ತೊಂದರೆಗಳಾಗಿತ್ತು. ಅವೆಲ್ಲವನ್ನೂ ಪರೀಕ್ಷಿಸಿ ಸರಿಪಡಿಸಿದ್ದೇವೆ. ಕಂಪ್ಯೂಟರ್ ಸಾಮಾನ್ಯ ಜ್ಞಾನ ಇಲ್ಲದವರಿಗೂ ಎಕ್ಸಾಂ ಬರೆಸುವಂತೆ ಮಾಡುವ ಗುರಿ ನಮ್ಮದು. ಈ ಸಾಫ್ಟ್ ವೇರ್ ನ್ನು ಇನ್ನೂ ಅಭಿವೃದ್ದಿಪಡಿಸುವ ಯೋಜನೆ ಇದೆ. ಸಾಧ್ಯವಾದರೆ ಅಂತರ್ಜಾಲ ಬಳಸಿ ಪರೀಕ್ಷೆ ಬರೆಯುವಂತೆ ಮಾಡಲಾಗುವುದು' ಎನ್ನುತ್ತಾರೆ, ಕಾಲೇಜಿನ ಸಾಫ್ಟ್ ವಾರ್ ಸೆಲ್ ನ ಸಿಬ್ಬಂದಿ ಗುರುರಾಜ್.
'ವಿದೇಶಗಳಲ್ಲಿ ಈ ಪದ್ದತಿಯಲ್ಲೇ ಪರೀಕ್ಷೆಗಳು ನಡೆಯುತ್ತವೆ ಎಂದು ಕೇಳಿದ್ದೆ. ಆದರೆ ನಮಗೇ ಆನ್ಲೈನ್ ಪದ್ದತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತಸವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕೆಂದವರಿಗೆ ಇದೊಂದು ಯಶಸ್ಸಿನ ಮೊದಲ ಹೆಜ್ಜೆ. ಹೆಚ್ಚಿನ ಓದು ಇಲ್ಲಿ ಅಗತ್ಯ. ಇದೊಂದು ಉತ್ತಮ ಪದ್ದತಿ' ಎಂದು ತಮ್ಮ ಸಹಮತ ಸೂಚಿಸುತ್ತಾರೆ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ಫಾತಿಮ ಇಶ್ರತ್.

Thursday 20 August 2009

ಜಾಹಿರಾತು ಜಾದು...

'ವಾಷಿಂಗ್ ಪೌಡರ್ ನಿರ್ಮಾ, ಇದು ಯಾರು ಮಾಡಿದ ಕರ್ಮಾ..' ಎಂದು ಹಾಲುಗಲ್ಲದ ಮಕ್ಕಳು ವಾಷಿಂಗ್ ಪೌಡರ್ ನಿರ್ಮಾದ ಜಾಹಿರಾತನ್ನು ರಿಮಿಕ್ಸ್ ಮಾಡಿ ಹಾಡುವುದು ಕೆಳಿದರೆ ಅಚ್ಚರಿಯಾಗದಿರದು. ಇವರಿಗೆ ಹೇಗೆ ತಿಳಿಯಿತು ಇದೆಲ್ಲ ಎಂಬ ಪ್ರಶ್ನೆ ಹುಟ್ಟುವುದು ಸಹಜ. ಹೌದು ಇದೆಲ್ಲವೂ ನಮ್ಮ ಜಾಹಿರಾತಿನ ಮಹಿಮೆ. ಬೆಂಗಳೂರಿನಲ್ಲಿ ಸೂಪರ್ ಮಾರ್ಕೆಟೊಂದನ್ನು ನಡೆಸುತ್ತಿರುವ ನನ್ನ ಸ್ನೇಹಿತನೊಬ್ಬ ಇತ್ತೀಚಿಗೆ ನನ್ನಲ್ಲಿ ಮಾತನಾಡುತ್ತ ಒಂದು ಮಾತು ಹೇಳಿದ. ಮಾರುಕಟ್ಟೆಯಲ್ಲಿ ಪ್ರಸಿದ್ದವಾಗಿರುವ ಗೋಧಿ ಹಿಟ್ಟು ತಯಾರಕ ಕಂಪೆನಿಯೊಂದು ಇತ್ತೀಚಿಗೆ ಒಂದು ಕೆ.ಜಿ. ಅಟ್ಟಾದ ಜೊತೆಗೆ ಉಪ್ಪಿನ ಪ್ಯಾಕೇಟು ನೀಡುವ ಜಾಹಿರಾತೊಂದನ್ನು ಬಿತ್ತರಿಸಿತ್ತಂತೆ. ಬೆಳಿಗ್ಗೆಯಷ್ಟೇ ಮಾಧ್ಯಮಗಳಲ್ಲಿ ಜಾಹಿರಾತು ಬಂದಿದೆ. ಮಾರುಕಟ್ಟೆಗೆ ಅದು ಪ್ರವೇಶಿಸುವಾಗ ಕನಿಷ್ಟ ಪಕ್ಷ ಇನ್ನೊಂದು ದಿನ ಕಳೆಯಬಹುದು. ಆದರೆ ಆ ದಿನ ಆತನ ಶಾಪ್ ಗೆ ಬಂದಿದ್ದ ಸುಮಾರು 75%ರಷ್ಟು ಜನ ಗ್ರಾಹಕರು ಆ ಆಫರ್ ಪ್ಯಾಕನ್ನೇ ಕೇಳುತ್ತಿದ್ದರಂತೆ! ಬಹುಷಃ ಜಾಹಿರಾತಿನ ಪ್ರಖ್ಯಾತಿಗಳ ಬಗ್ಗೆ ಹೇಳಲು ಇದಕ್ಕಿಂತ ಉತ್ತಮ ಉದಾಹರಣೆ ಅನಾವಶ್ಯಕ. ಟಿ.ವಿ. ರೇಡಿಯೋಗಳಲ್ಲಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುವ, 'ಟೈಮ್' ಸೆನ್ಸೇ ಇಲ್ಲದ ಪತ್ರಿಕೆಗಳಲ್ಲಿ ಮುಖಪುಟವನ್ನೇ ಆಕ್ರಮಿಸಿಕೊಳ್ಳುವ ಜಾಹಿರಾತುಗಳಲ್ಲಿ ಹೆಚ್ಚಿನವು ವೀಕ್ಷಕರನ್ನು, ಕೇಳುಗರನ್ನು, ಓದುಗರನ್ನು ಮೋಡಿ ಮಾಡದಿರದು
ಪ್ರಿಯಾಂಕ ಚೋಪ್ರ ಲಕ್ಸ್ ಸೋಪ್ ನಿಂದ ಸ್ನಾನ ಮಾಡಿ, ಮಹಡಿಯಿಂದ ಕೆಳಗಿಳಿದು ಬರುವಾಗ ಆಕೆಯ ಭುಜದ ಮೇಲಿನಿಂದ ಬಟ್ಟೆ ಜಾರುವ ಜಾಹಿರಾತು ನೋಡಿದಾಗ ಹೆಚ್ಚಿನ ಮಹಿಳೆಯರ ಸ್ನಾನದ ಸಾಬೂನುಗಳು ಲಕ್ಸ್ ಆಗುತ್ತದೆ. ಕತ್ರೀನ ಕೈಫ್ 'ವೀಟ್' ಹಚ್ಚಿದಾಗ ಹದಿಹರೆಯದ ಹುಡುಗಿಯರಿಗೆಲ್ಲ 'ವ್ಯಾಕ್ಸೀನ್'ಗೆ ಔಷಧ ಸಿಗುತ್ತದೆ. ಆಸಿನ್ ಕೂದಲಿನಲ್ಲಿ ಹೊಟ್ಟು ಇಲ್ಲವೇ ಇಲ್ಲ ಎಂದು ತಲೆ ಅಲ್ಲಾಡಿಸಿದಾಗ ಆ ಶ್ಯಾಂಪೂ ಖರೀದಿಸುವ ಮನಸಾಗುತ್ತದೆ. ಅಮೀರ್ ಖಾನ್ 'ಕೋಕ್' ಕುಡಿದಾಗ ನಮಗೂ ಕೋಕ್ ಕುಡಿಯುವ ಮನಸಾಗುತ್ತದೆ. ಅಭಿಷೇಕ್ ಬಚ್ಚನ್ ವಾಕ್ ಆಂಡ್ ಟಾಕ್ ಎಂದಾಗ ಮುಂದಿನ ಬಾರಿ ಟಾಕ್ ಮಾಡುವಾಗ ಅಟೋಮೇಟಿಕ್ ಆಗಿ ಕಾಲು ವಾಕ್ ಮಾಡುತ್ತದೆ. ಪುಟ್ಟ ಬಾಲೆಯೋರ್ವಳು ತರಗತಿಯಲ್ಲಿ 'ತನ್ನ ಐದು ಜನ ಸ್ನೇಹಿತರೊಂದಿಗೆ ಮಾತನಾಡುವುದಿಲ್ಲ, ಕಾಲ್ ಮಾಡುತ್ತೇನೆ' ಎಂದು ಕಪ್ಪು ಹಲಗೆಯ ಮೇಲೆ ಬರೆದಾಗ ಏರ್ ಟೆಲ್ ಸಿಮ್ ಖರೀದಿಸುವ ಮನಸಾಗುತ್ತದೆ. ಪರೀಕ್ಷೆಯ ಫಲಿತಾಂಶ ನೋಡಲು ಹೋದ ಝೂಝು ಒಂದು ಫಲಿತಾಂಶ ನೋಡಿ ತಲೆತಿರುಗಿ ಬಿದ್ದಾಗ, ಮುಂದಿನ ಬಾರಿ ವೋಡಾಫೋನ್ ನಲ್ಲೇ ಫಲಿತಾಂಶ ನೋಡುವ ಯೋಚನೆ ಹೊಳೆಯುತ್ತದೆ.
ಪ್ರತಿಯೊಂದು ಜಾಹಿರಾತು ನೋಡಿದ ನಂತರ ಗ್ರಾಹಕನ ಮನಸ್ಸುಒಮ್ಮೆ ಚಂಚಲವಾಗುವುದು ಸಹಜ. ಸೆಟ್ ವೆಟ್ ಡಿಯೋಡ್ರೆಂಟ್ ಜಾಹಿರಾತು ನೋಡಿದ ನಂತರ ಕಾಲೇಜು ಹುಡುಗನ ಚಂಚಲ ಮನಸ್ಸು ಮುಂದಿನ ಬಾರಿಯ ಡಿಯೋಡ್ರೆಂಟ್ ಸೆಟ್ ವೆಟ್ ಅನ್ನೇ ತೆಗೆದುಕೊಂಡು 'ಪರೀಕ್ಷಿಸು'ವುದು ಸಾಮಾನ್ಯ. ಜಾಹಿರಾತು ಎಂಬ ಮಾಯಾಜಾಲದೊಳಗೆ ಪ್ರವೇಶಿಸಿದರೆ ಅದನ್ನೊಮ್ಮೆ ಖರೀದಿಸುವ, ಕನಿಷ್ಟ ಪಕ್ಷ ಪರೀಕ್ಷಿಸುವ ಯೋಚನೆ ಮೂಡುತ್ತದೆ. ವೋಡಫೋನ್ ಜಾಹಿರಾತಿನಲ್ಲಿ ಪುಟ್ಟ ಬಾಲೆಯನ್ನು ಎಲ್ಲೆಂದರಲ್ಲಿ ಹಿಂಬಾಲಿಸುವ ನಾಯಿ, ನೆಟ್ವ್ರ್ಕ್ ನ ಬಗ್ಗೆ ಹೇಳುತ್ತಿದ್ದರೂ ಅದರ ಸತ್ಯಾಅತ್ಯತೆ ಗ್ರಾಹಕನಿಗೆ ಬಿಟ್ಟ ವಿಚಾರ. 'ಕಾಲವನ್ನು ತಡೆಯೋರು ಯಾರೂ ಇಲ್ಲ' ಎಂಬಂತೆ ಹೆಚ್ಚುತ್ತಿರುವ ಜಾಹಿರಾತುಗಳಿಂದಾಗಿ, ಕಾರ್ಯಕ್ರಮಗಳೆಲ್ಲ ಜಾಹಿರಾತಿನಂತಾಗಿದೆ. ಅಂದರೆ ಜಾಹಿರಾತಿನ ಮಧ್ಯದಲ್ಲಿ ಕಾರ್ಯಕ್ರಮಕ್ಕೆ ಬ್ರೇಕ್! ಅರ್ಧ ಗಂಟೆಯ ಧಾರಾವಾಹಿಯೊಂದಿದ್ದರೆ ಅದರಲ್ಲಿ ಅರ್ಧದಷ್ಟು ಭಾಗ ಜಾಹಿರಾತುಗಳಿಂದ ತುಂಬುತ್ತಿರುವುದು ಹೊಸ ಟ್ರೆಂಡ್.
ಜಾಹಿರಾತುಗಳೇ ಇಲ್ಲದೇ ಕಾರ್ಯಕ್ರಮಗಳನ್ನು ವೀಕ್ಷಿಸುವ, ಕೇಲುವ, ಪತ್ರಿಕೆಗಳನ್ನು ಓದುವ ಪರಿಸ್ಥಿತಿ ಬಂದರೆ ಜನರು ಅದರಿಂದ ದೂರವೇ ಇರುತ್ತಿದ್ದರೋ ಏನೋ! ಅಷ್ಟೊಂದಾಗಿ ಹಲವರು ಅದಕ್ಕೆ ಎಡಿಕ್ಟ್ ಆಗಿ ಬಿಟ್ಟಿದ್ದಾರೆ.
ಕಳೆದ ವರ್ಷ ಮಾರುಕಟ್ಟೆಗೆ ಪ್ರವೇಶಿಸಿದ ಗರ್ಭನಿರೋಧಕ ಮಾತ್ರೆ 'ಐಪಿಲ್' ಇಂದು ಜನಪ್ರಿಯವಾಗಿರಷ್ಟು ಬೇರೆ ಯಾವುದೇ ತಿಪ್ಪರಲಾಗ ಹಾಕುತ್ತಿರುವ ಮಾತ್ರೆಗಳು ಪ್ರಚಲಿತವಾಗಿಲ್ಲ ಎಂದು ಕಣ್ಚುಚ್ಚಿ ಹೇಳಬಹುದು.
ಜಾಹಿರಾತುಗಳು ಕೆಲವೊಮ್ಮೆ ಗ್ರಾಹಕರಲ್ಲಿ ಅರಿವು ಮೂಡಿಸಲೂ ಸಹಕರಿಸುತ್ತದೆ. ಸರ್ಕಾರಿ ಪ್ರಾಯೋಜಿತ ಗ್ರಾಹಕ ಸ್ನೇಹಿ 'ಜಾಗೋ ಗ್ರಾಹಕ್ ಜಾಗೋ' ಎಂಬ ಜಾಹಿರಾತು ಗ್ರಾಹಕನಲ್ಲಿ ಕಾಳಜಿ ಮೂಡಿಸುತ್ತದೆ. ಎಂಆರ್ ಪಿ, ತೂಕ, ಬಿಲ್, ಬಳಸಬಹುದಾದ ಅವಧಿಯ ಬಗ್ಗೆ ತಿಳಿ ಹೇಳುತ್ತದೆ. ಹೊಸ ವಸ್ತುವೊಂದು ಮಾರುಕಟ್ಟೆಗೆ ಬಂದಾಗ ನಮ್ಮ ಮನೆ ಬಾಗಿಲಿಗೆ ಜಾಹಿರಾತಿನ ಮೂಲಕ ತಲುಪುವ ಅದು ಕೆಲವೊಮ್ಮೆ ಹೊಸ ವಸ್ತುಗಳ ಬಗ್ಗೆ ತಿಳಿಸಿಕೊಡುತ್ತದೆ. ಅದು ಉಪಯುಕ್ತವಾಗಿರಲೂಬಹುದು ಅಥವಾ ಹತ್ತರಲ್ಲಿ ಹನ್ನೊಂದು ಆಗಿರಲೂಬಹುದು. ಫೆವಿಕಾಲ್ ತಿಂದ ಕೋಳಿ ಇಟ್ಟ ಮೊಟ್ಟೆ, ಒಡೆಯದೇ ಇರುವ ಜಾದೂ ಮೂಲಕ ಮನೋರಂಜನೆಯನ್ನು ನೀಡುವ ಜಾಹಿರಾತುಗಳು ನಮ್ಮನ್ನೊಮ್ಮೆ ಹೊಸ ಜೀವನ ಶೈಲಿ, ಹೊಸತನದತ್ತ ಕೊಂಡೊಯ್ಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Wednesday 19 August 2009

ಯಂತ್ರ ಬರೆದ ಕವನ...


ಯಂತ್ರ ಬರೆದ ಕವನ...ಟಾಯ್ಲೆಟ್ ನಲ್ಲಿ ಕೂತು 'ಹೆಚ್ಚು ಬಿತ್ತೋ...' ಎಂದು ಪರೀಕ್ಷಿಸುವ ಮನೋಸ್ಥಿತಿಯ ಜಿಪುಣ ಸ್ನೇಹಿತನೊಬ್ಬ, ಸುನಾಮಿಗೆ ಸಿಲುಕಿ ಬಲಿಯಾದ ಮುಗ್ಧ ಜೀವಗಳ ಕುಟುಂಬದವರಿಗೆ, ಸಾವಿರ ರೂ.ಗಳ ಗರಿಗರಿ ನೋಟುಗಳನ್ನು ದೇಣಿಗೆಯಾಗಿ ನೀಡಿದಾಗ ನನಗೆ ಅಚ್ಚರಿಯಾಗಿತ್ತು. ಸಾಕ್ಷಾತ್ ಪರಮಾತ್ಮನೇ ಆತನ ಮುಂದೆ ಬಂದು 'ನನಗೊಂದು ರೂಪಾಯಿ ಭಿಕ್ಷೆ ಹಾಕಪ್ಪ...' ಎಂದು ಬೇಡಿದರೂ ಕೊಡದ ಆತ, ಅಂದು ದೇಣಿಗೆ ನೀಡಿದ್ದ. 'ಯಾಕೋ? ಈ ಬದಲಾವಣೆಗೆ ಕಾರಣವೇನೋ?' ಎಂದಾಗ ಆತ ನೀಡಿದ್ದ ಉತ್ತರ ನನ್ನ ಮೈ ನವೀರಳಿಸಿತು. 'ಸುನಾಮಿಗೆ ಬಲಿಯಾದ ಮುಗ್ಧ ಜನರನ್ನು ರಾಶಿ ರಾಶಿಯಾಗಿ ಬಾವಿಯಾಳದ ಗುಂಡಿಯಲ್ಲಿ ಹೂಳುತ್ತಿದ್ದ ಛಾಯಾಚಿತ್ರ ನೋಡಿದೆ, ಕರುಳು ಕಿತ್ತು ಬಂತು' ಎಂದ!

ಹ್ಹಾ... ಫೋಟೋ ಅರ್ಥಾತ್ ಛಾಯಾಚಿತ್ರಗಳೇ ಹಾಗೆ. ಸಾವಿರ ಪದದಲ್ಲಿ ಹೇಳಲಾಗದ್ದನ್ನು ಒಂದು ಛಾಯಾಚಿತ್ರದ ಮೂಲಕ ಹೇಳಬಹುದು ಎಂಬ ಮಾತು ಅಕ್ಷರಶಃ ನಿಜ. ಬೆಳಕಿನ ಜೊತೆ ಆಟ ಆಡಿದಾಗ ಮೂಡಿ ಬರುವುದೇ ಸುಂದರ ಛಾಯಾಚಿತ್ರ. ಅದು ಅಂತಿಂಥ ಆಟವಲ್ಲ, ಕ್ಯಾಮರ ಮತ್ತು ಲೆನ್ಸ್ ನ ಜೊತೆಯಾಟ. ಯಾವುದೋ ಕ್ಷಣದಲ್ಲಿ ಸೆರೆಹಿಡಿದ, ಎಲ್ಲೋ ಕಂಡ ಚಿತ್ರಗಳನ್ನು ತೆಗೆದು ನೋಡಿದಾಗ ಮನದಲ್ಲಿ ಹೊಳೆಯುವ ಯೋಚನೆಗಳು ನೂರೆಂಟು.

ಮಧ್ಯಾಹ್ನದ ಹೊತ್ತಿನಲ್ಲಿ ಬೋಳು ಮರದ ಕೆಳಗೆ ಹೋಗುವ ಆತ, ರೈಲ್ವೇ ಟ್ರಾಕ್ ಮೇಲೆ ತಲೆಬಗ್ಗಿಸಿ ನಡೆಯುತ್ತಿರುವ ವೃದ್ದ, ಅಮ್ಮನಿಗೆ ಪಪ್ಪಿ ಕೊಡುವ ಕಂದ, ಕಿಕ್ಕಿರಿದು ತುಂಬಿದ ಸ್ಕೂಲ್ ರಿಕ್ಷಾದಿಂದ ಇಣುಕಿ ನೋಡುವ ಹುಡುಗಿ, ತ್ರಿವರ್ಣ ಧ್ವಜ ಹಿಡಿದು ಓಡುವ ಸಣ್ಣ ಮಗು, ದೊಡ್ಡ ಮೈದಾನದ ಮಧ್ಯದಲ್ಲಿ ಇರುವ ಒಬ್ಬನೇ ಆಟಗಾರ.... ಹೀಗೆ ಹತ್ತು ಹಲವು ಅರ್ಥಗಳನ್ನು ಕಟ್ಟಿಕೊಡುವ ಛಾಯಾಚಿತ್ರಗಳನ್ನು ಸೆರೆಹಿಡಿದಾಗ ಅವು ಕೊಡುವ ಖುಷಿ ಅಷ್ಟಿಷ್ಟಲ್ಲ.

ಛಾಯಾಚಿತ್ರವೊಂದನ್ನು ಯಾವ ದೃಷ್ಟಿಕೋನವನ್ನಿಟ್ಟುಕೊಂಡು ಬೇಕಾದರೂ ಅರ್ಥೈಸಬಹುದು. ನೋಡುವ ಕಣ್ಣುಗಳಲ್ಲಿ ಕಲಾತ್ಮಕತೆ ಅಡಗಿದ್ದರೆ, 'ಛಾಯಾಚಿತ್ರವೊಂದು, ಅರ್ಥ ಹಲವು' ಆಗಬಹುದು. ಸಂಸತ್ ಭವನದ ಮುಂದೆ ಪ್ರತಿಷ್ಟಿತ ರಾಜಕಾರಣಿಯೊಬ್ಬರು ಮಾಧ್ಯಮಗಳ ಜೊತೆ ಮಾತನಾಡುತ್ತಿರುವಾಗ ಅವರನ್ನು ಸೆರೆಹಿಡಿಯಲು ನಿಂತ ಫೋಟೋಗ್ರಾಫರ್ಗಳ ಗುಂಪಿನ ಚಿತ್ರ ತೆಗೆದರೆ ಅದು ಕೊಡುವ ಅರ್ಥ ಹಲವು.

ಕವಿಯೊಬ್ಬನು ತನಗನಿಸಿದ್ದನ್ನು ಶಬ್ದಗಳಲ್ಲಿ ಕಟ್ಟಿಕೊಟ್ಟರೆ, ಛಾಯಾಗ್ರಾಹಕನೊಬ್ಬ ತನ್ನ 3ನೇ ಕಣ್ಣಲ್ಲಿ ಕಂಡದನ್ನು 'ಫ್ರೇಮ್'ನಲ್ಲಿ ಕಟ್ಟಿಕೊಡುತ್ತಾನೆ. ಕ್ಯಾಮರಾವೆಂಬ ಯಂತ್ರ ಕವನ ಬರೆದಾಗ ಅತ್ಯುತ್ತಮ ಛಾಯಾಚಿತ್ರ ಮೂಡುತ್ತದೆ. 1994ರಲ್ಲಿ ಸುಡಾನ್ನಲ್ಲಿ ಬರಗಾಲ ಬಂದಾಗ, ಕೆವಿನ್ ಕಾರ್ಟರ್ ಎಂಬ ಛಾಯಾಗ್ರಾಹಕ ಸೆರೆಹಿಡಿದ ಚಿತ್ರ ಅತ್ಯುತ್ತಮವಾದದ್ದು. ಹಸಿವಿನಿಂದ ನರಳುತ್ತ, ಹತ್ತಿರದ ಗಂಜಿ ಕೇಂದ್ರಕ್ಕೆ ತೆರಳುತ್ತಿರುವ ಅನಾಥ ಮಗು ಇನ್ನೇನು ಸಾಯುವ ಹಂತದಲ್ಲಿದೆ. ಆ ಮಗುವಿನ ಸಾವನ್ನೇ ಕಾದು ರಣಹದ್ದೊಂದು ಕೂತಿದೆ! ಈ ಒಂದು ಅದ್ಭುತ ಛಾಯಾಚಿತ್ರದಿಂದಾಗಿ ಜಗತ್ತು ಸುಡಾನ್ ಗೆ ಒದಗಿದ್ದ ಬರಗಾಲವನ್ನು ಅರ್ಥೈಸಿಕೊಂಡಿತು. ಆ ಛಾಯಾಚಿತ್ರಕ್ಕಾಗಿ ಕೆವಿನ್ ಗೆ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಬಂತು. ಕ್ಯಾಮರಾ ಹಿಡಿದುಕೊಂಡು ಸುತ್ತಾಡಿದ ಮಾತ್ರಕ್ಕೆ ಎಲ್ಲರೂ ಫೋಟೋಗ್ರಾಫರ್ ಗಳಾಗುವುದಿಲ್ಲ. ಉತ್ತಮ ಚಿತ್ರವೊಂದು ಸಿಗಬೇಕಾದರೆ ಅದಕ್ಕೆ ಅಷ್ಟೇ ಪರಿಶ್ರಮ ಅಗತ್ಯ. ಅಂದ ಹಾಗೆ ಆಗಷ್ಟ್ 19 ವಿಶ್ವ ಫೋಟೋಗ್ರಫಿ ದಿನ. 1839ರಲ್ಲಿ ಫ್ರಾನ್ಸ್ ಸರ್ಕಾರ ಆಧಿಕೃತವಾಗಿ ಛಾಯಾಗ್ರಹಣದ ಅವಿಷ್ಕಾರವನ್ನು ಘೋಷಿಸಿದ ದಿನ. ಆ ನೆನಪಿಗಾಗಿ ವಿಶ್ವ ಫೋಟೋಗ್ರಫಿ ದಿನವನ್ನು ಆಚರಿಸಲಾಗುತ್ತದೆ.

ಅಂದೆಲ್ಲ ಛಾಯಾಗ್ರಹಣ ಇಂದಿನ ಹಾಗೆ ಸುಲಭವಾಗಿರಲಿಲ್ಲವಂತೆ. ಕೇವಲ ಒಂದು ಛಾಯಾಚಿತ್ರಕ್ಕಾಗಿ 'ಎಕ್ಸ್ಪೋಸ್' ಮಾಡುವುದಕ್ಕಾಗಿಯೇ 3 ರಿಂದ 5 ನಿಮಿಷಗಳು ಬೇಕಾಗಿತ್ತಂತೆ. ಅಷ್ಟೊತ್ತು ಕೂಡ ಎದುರು ಕುಳಿತ ವ್ಯಕ್ತಿ ಕಿಸಿಕ್ಕೆನ್ನದೇ, ತುಟಿ ಪಿಟಿಕ್ ಮಾಡದೇ ಅಲುಗಾಡದೇ ಕುಳಿತಿರಬೇಕಿತ್ತಂತೆ! 70ರ ದಶಕದಲ್ಲಿ ಛಾಯಾಗ್ರಹಣ ಮಾಡಿದ ಬಳಿಕ ಅದನ್ನು ಪ್ರಿಂಟ್ ಗಾಗಿ ಹತ್ತಿಪ್ಪತ್ತು ದಿನ ಕಾಯಬೇಕಿತ್ತಂತೆ! ಆದರೆ ಈಗ 'ಸರ್ವಂ ಡಿಜಿಟಲ್ ಮಯಂ'. ಮೊಬೈಲ್ ಗಳಲ್ಲೂ ಕ್ಯಾಮರಾ ಬಂದಿದೆ. ಛಾಯಾಗ್ರಹಣ ಸುಲಭವಾಗಿದೆ. ಮೊನ್ನೆ ಸ್ನೇಹಿತನೋರ್ವ ಅರ್ಜೆಂಟಾಗಿ ಫೋಟೋ ಬೇಕಿತ್ತೆಂದಾಗ ನಾಲ್ಕೈದು ಕ್ಲಿಕ್ಕಿಸಿ, 5-6 ನಿಮಿಷಗಳಲ್ಲಿ ಪ್ರಿಂಟ್ ಹಾಕಿಸಿ ಅವನ ಕೈಗಿತ್ತಿದ್ದು ನೆನಪಾಗುತ್ತಿದೆ!

ಒಂದು ವೇಳೆ ಛಾಯಾಗ್ರಹಣವೇ ಇರದಿರುತ್ತಿದ್ದರೆ? ನಮ್ಮ ಪರಿಸ್ಥಿತಿ ಏನಾಗುತ್ತಿತ್ತು? ಈಗಿನ ಹಾಗೆ ಹುಡುಗಿ ನೋಡಿದ ಬಳಿಕ ಆಕೆಯ ಫೋಟೋ ಕೇಳುವ ಪ್ರಮೇಯವೇ ಇರುತ್ತಿರಲಿಲ್ಲವೇನೋ! ಏನೇ ಆಗಲಿ, ಆ ಕಾಲವನ್ನು ಊಹಿಸಿಕೊಳ್ಳುವುದೂ ಕಷ್ಟ. ಹ್ಯಾಟ್ಸ್ ಆಫ್ ಫೋಟೋಗ್ರಫಿ. ಕ್ಲಿಕ್... ಕ್ಲಿಕ್...